ಕೈಗಾರಿಕೆಗಳ ನಿಯಂತ್ರಣ

ಕೈಗಾರಿಕೆಯನ್ನು ಎರಡು ತೆರಗಳಲ್ಲಿ ನಿಯಂತ್ರಿಸಬಹುದು: 1 ಕೈಗಾರಿಕೆಯಿಂದಲೇ, 2 ಸರ್ಕಾರದ ಮೂಲಕ. ಒಂದು ಕೈಗಾರಿಕೆಯ ಸ್ವನಿಯಂತ್ರಣ ಸಾಮಾನ್ಯವಾಗಿ ಕೈಗಾರಿಕೆಗಳ ಸಂಘಗಳಿಂದಲೂ ವಾಣಿಜ್ಯ ಸಂಸ್ಥೆಗಳಿಂದಲೂ ಜರಗುತ್ತದೆ. ಉತ್ಪತ್ತಿಯಲ್ಲಿ ಇಷ್ಟು ಭಾಗವನ್ನು ಹೊರಗೆ ರಫ್ತು ಮಾಡಬೇಕೆಂದು ಅವು ವಿಧಿಸಬಹುದು. ಉತ್ಪತ್ತಿ ಹೆಚ್ಚಾಗಿ ಸರಕುಗಳಿಗೆ ಬೇಡಿಕೆ ಲಭ್ಯವಾಗುವುದು ಕಷ್ಟವೆನಿಸಿದಾಗ, ಅವು ತಮ್ಮ ಸದಸ್ಯ ಸಂಸ್ಥೆಗಳ ಉತ್ಪಾದನೆಯನ್ನು ಪರಿಮಿತಗೊಳಿಸಬಹುದು. ಬಗೆಬಗೆಯ ಸರಕುಗಳ ತಯಾರಿಕೆಯನ್ನು ಕ್ರಮಪಡಿಸಲು ಯತ್ನಿಸಬಹುದು.

ಆದರೆ ಇಂಥ ನಿಯಂತ್ರಣಗಳೆಲ್ಲ ಸ್ವಪ್ರೇರಿತವಾದವು. ಕೈಗಾರಿಕೆಯ ಉತ್ಪಾದಕರು ತಮ್ಮತಮ್ಮಲ್ಲಿ ಮಾಡಿಕೊಂಡ ಒಪ್ಪಿಗೆಯ ಪ್ರಕಾರ ಈ ನಡೆವಳಿಕೆಗಳು ಜರಗುತ್ತವೆ. ಇವನ್ನು ಪರಸ್ಪರ ಸಮ್ಮತಿಯಿಂದ ಬದಲಾಯಿಸಬಹುದು ಅಥವಾ ಕೊನೆಗೊಳಿಸಬಹುದು. ಅಥವಾ ಕೈಗಾರಿಕೆಯ ಒಂದು ವಿಭಾಗ ಈ ನಿರ್ಬಂಧಕ್ಕೆ ಒಳಪಡದೆ ಇರಬಹುದು. ಸ್ವನಿಯಂತ್ರಣಕ್ಕೆ ಕಾನೂನಿನ ಬೆಂಬಲವಿಲ್ಲ. ಒಪ್ಪಂದವನ್ನು ಮುರಿದವರನ್ನು ಯಾಕೆ ಹೀಗೆ ಮಾಡಿದಿರಿ ಎಂದು ಕೇಳುವ ಹಾಗಿಲ್ಲ; ತಪ್ಪಿತಸ್ಥರೆಂದು ಕಂಡುಬಂದರೆ ಅವರನ್ನು ಶಿಕ್ಷಿಸುವ ಹಾಗೂ ಇಲ್ಲ.

ವಿಸ್ತøತವೂ ಪರಿಣಾಮಕಾರಿಯೂ ಆದ ಕೈಗಾರಿಕಾ ನಿಯಂತ್ರಣವನ್ನು ಸರ್ಕಾರಗಳು ತಂತಮ್ಮ ದೇಶಗಳ ವಿಧಾನಮಂಡಲಗಳು ಅಂಗೀಕರಿಸಿದ ಕಾಯಿದೆಗಳ ಮತ್ತು ಅವುಗಳ ನಿಯಮಾವಳಿಗಳ ಮೂಲಕ ಮಾಡುತ್ತವೆ. ಇದಕ್ಕೆ ಕಾನೂನಿನ ಬೆಂಬಲವಿರುತ್ತದೆ. ಇದು ಅನುಮಿತಿ ಮತ್ತು ಶಿಕ್ಷೆ ಇವೆರಡು ರೂಪಗಳನ್ನೂ ಉಳ್ಳದ್ದು.

ಭಾರತದಲ್ಲಿ ಹೊಸ ಕೈಗಾರಿಕೆಗಳ ಪ್ರತಿಷ್ಠಾಪನೆ, ಸ್ಥಳ, ಗಾತ್ರ ಇವು ಕೈಗಾರಿಕಾಭಿವೃದ್ಧಿ ಮತ್ತು ನಿಯಂತ್ರಣ ಕಾಯಿದೆಯಿಂದ ನಿಯಂತ್ರಿತವಾಗುತ್ತವೆ. ಇದಲ್ಲದೆ, ಒಂದು ಕಂಪನಿ ಎಷ್ಟು ಬಂಡವಾಳವನ್ನು ಸಂಗ್ರಹಿಸಬಹುದು, ಇದರಲ್ಲಿ ಷೇರು ಬಂಡವಾಳ ಎಷ್ಟು, ವಿತ್ತೀಯ ಸಂಸ್ಥೆಗಳಿಂದ ಎಷ್ಟನ್ನು ಸಾಲವಾಗಿ ತೆಗೆದುಕೊಳ್ಳಬಹುದು, ಹೊಸ ಕೈಗಾರಿಕೆಗಳಲ್ಲಿ ವಿದೇಶಿ ಬಂಡವಾಳಕ್ಕೆ ಎಷ್ಟರಮಟ್ಟಿಗೆ ಅವಕಾಶ ಕೊಡಬಹುದು ಇವೇ ಮುಂತಾದವೆಲ್ಲವನ್ನೂ ಭಾರತ ಸರ್ಕಾರ ಹಿಡಿತದಲ್ಲಿಟ್ಟುಕೊಳ್ಳುತ್ತದೆ. ಇದರ ಜೊತೆಗೆ, ಎಲ್ಲ ಸಾರ್ವಜನಿಕ ಮತ್ತು ಖಾಸಗಿ ಕೂಡು ಬಂಡವಾಳ ಕಂಪನಿಗಳೂ ನೋಂದಣಿ ಮಾಡಿಕೊಳ್ಳಬೇಕೆಂದು ವಿಧಿಸುವ ಭಾರತೀಯ ಕಂಪನಿಗಳ ಕಾಯಿದೆ ಸಹ ಜಾರಿಯಲ್ಲಿದೆ. ಇದರ ಪ್ರಕಾರ ಕೈಗಾರಿಕೆಗಳ ಆಡಳಿತದ ಮೇಲೆ ಹತೋಟಿಯಿರುವುದಲ್ಲದೆ ನಿಯಮಗಳನ್ನು ಮುರಿದಾಗ ಶಿಕ್ಷೆಗಳನ್ನೂ ವಿಧಿಸಲಾಗುತ್ತದೆ. ಇಷ್ಟಲ್ಲದೆ ವಿವಿಧ ಕೈಗಾರಿಕೆಗಳ ಉತ್ಪಾದನೆ, ವಿತರಣೆ ಮತ್ತು ಬೆಲೆಗಳೂ ಕಾಲಕಾಲಕ್ಕೆ ನಿಯಂತ್ರಿತವಾಗುತ್ತವೆ. ಅಂಥ ಕೈಗಾರಿಕೆಗಳ ಕೆಲವು ಉದಾಹರಣೆಗಳೆಂದರೆ, ಉಕ್ಕು, ಸಿಮೆಂಟ್, ಕಲ್ಲಿದ್ದಲು, ಸಕ್ಕರೆ, ಪೆಟ್ರೋಲಿಯಂ. ವಸ್ತುತಃ ಒಂದಿಲ್ಲ ಒಂದು ವಿಧದಲ್ಲಿ ನಿಯಂತ್ರಣಕ್ಕೆ ಒಳಗಾಗದ ದೊಡ್ಡ ಉದ್ಯಮವೇ ಭಾರತದಲ್ಲಿಲ್ಲವೆನ್ನಬಹುದು.

ಕೈಗಾರಿಕೆಗಳಲ್ಲಿ ಮುಂದುವರಿದಿರುವ ದೇಶಗಳಲ್ಲಿ ಕೈಗಾರಿಕೆಗಳ ಏಕಸ್ವಾಮ್ಯಗಳನ್ನು ಕಾನೂನಿನಿಂದ ನಿಯಂತ್ರಿಸಲಾಗಿದೆ. ಯಾವುದೊಂದು ಉತ್ಪಾದನ ಸಂಸ್ಥೆಯಾಗಲಿ, ಅಂಥ ಸಂಸ್ಥೆಗಳ ಸಂಘವಾಗಲಿ, ಇತರ ಉತ್ಪಾದಕರ ಮತ್ತು ಅನುಭೋಗಿಗಳ ಹಿತಕ್ಕೆ ಧಕ್ಕೆ ಬರುವಷ್ಟು ಪ್ರಬಲವಾಗದಂತೆ ಮಾಡುವುದು ಇಂಥ ಕಾನೂನಿನ ಉದ್ದೇಶ.
(ಎಚ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ